ಕೀವು ನಂಜು

ಸಾಮಾನ್ಯವಾಗಿ ಕೀವು ಉತ್ಪತ್ತಿಮಾಡುವ ರೋಗಾಣುಗಳಿಂದ ಉಂಟಾದ ಉರಿಯೂತದಲ್ಲಿ ಸ್ಥಳಿಕ ರಕ್ಷಣಾ ಪ್ರತಿಬಂಧಕಗಳ ಕುಸಿತದಿಂದ ಜಾಡ್ಯ ಶರೀರದ ನಾನಾ ಭಾಗಗಳಿಗೆ ಹರಡುವುದರಿಂದ ಅಥವಾ ರೋಗಾಣುಗಳ ಇಲ್ಲವೇ ಅವುಗಳಿಂದುಂಟಾದ ಉರಿಯೂತದಿಂದ ಉತ್ಪತ್ತಿಯಾದ ವಿಷಪದಾರ್ಥಗಳು ಶರೀರ ಹೀರಿಕೊಂಡು ಉಂಟಾಗುವ ದೈಹಿಕ ರೋಗಲಕ್ಷಣ (ಸೆಪ್ಸಿಸ್). ಕೀವು ಉತ್ಪತ್ತಿ ಮಾಡುವ ರೋಗಾಣುಗಳಲ್ಲಿ ಅತಿಮುಖ್ಯವಾದವು ಸ್ಟಫಿಲೋಕಾಕಸ್, ಸ್ಟ್ರೆಪ್ಟೊಕಾಕಸ್, ನ್ಯೂಮೊಕಾಕಸ್, ಮೆನಿಂಗೊಕಾಕಸ್ ಮತ್ತು ಗೋನೋಕಾಕಸ್ ; ಇವಲ್ಲದೆ ವಿಷಮಶೀತಜ್ವರಕ್ಕೆ ಕಾರಣವಾದ ರೋಗಾಣುಗಳೂ ಪ್ಲೇಗಿನ ರೋಗಾಣುಗಳೂ ಅಪೂರ್ವವಾಗಿ ಇತರ ರೋಗಾಣುಗಳೂ ಕೀವುನಂಜಿಗೆ ಕಾರಣ. ಕೀವನ್ನು ಉತ್ಪತ್ತಿಮಾಡುವ ಜೀವಾಣುಗಳು ಎಲ್ಲರ ಮ್ಯೆಮೇಲೆಯೂ ಸಾಮಾನ್ಯವಾಗಿ ಇವೆ. ಆದರೆ ಎಲ್ಲರಲ್ಲೂ ಅವು ಕೀವನ್ನು ಉತ್ಪತ್ತಿಮಾಡುವುದಿಲ್ಲ; ಎಲ್ಲರಲ್ಲೂ ಕೀವುನಂಜು ರೋಗಲಕ್ಷಣಗಳು ತೋರುವುದೂ ಇಲ್ಲ. ರೋಗ ಬರಬೇಕಾದರೆ ಈ ರೋಗಾಣುಗಳು ಅತ್ಯುಗ್ರ ವಿಷೋತ್ಪಾದಕಗಳಾಗಿರಬೇಕು. ಇಲ್ಲವೇ ಶರೀರದಲ್ಲಿನ ರಕ್ಷಣಾ ಪ್ರತಿಬಂಧಕಗಳು ಕುಸಿದಿರಬೇಕು; ಗಾಯ, ಶಸ್ತ್ರಚಿಕಿತ್ಸೆ, ಪ್ರಸವ ಇತ್ಯಾದಿ ಕಾರಣಗಳಿದ್ದು ಅಲ್ಲಿ ರೋಗಾಣುಗಳು ಅತಿಯಾಗಿ ಸಂತಾನಾಭಿವೃದ್ಧಿ ಹೊಂದಿ ಅದರಿಂದ ಕೀವು, ಕೀವುನಂಜು ಉತ್ಪತ್ತಿಯಾಗುವುದುಂಟು. ಕೀವುನಂಜು ಸಣ್ಣ ಮಕ್ಕಳಲ್ಲೂ ವಯಸ್ಸಾದವರಲ್ಲೂ ದೌರ್ಬಲ್ಯದಿಂದಿರುವರಲ್ಲೂ ಸಿಹಿಮೂತ್ರ ರೋಗಿಗಳಲ್ಲೂ ಪ್ರತಿವಿಷವಸ್ತುಗಳು ಕಡಿಮೆಯಾದಾಗ ಅತಿ ಬೇಗ ಕಾಣಬರುತ್ತದೆ. ಆಸ್ಪತ್ರೆಗಳಲ್ಲಿಯ ಹೆರಿಗೆ ಕೋಣೆ, ಶಸ್ತ್ರಚಿಕಿತ್ಸಾಮಂದಿರ ಮತ್ತು ಪ್ರಸವ, ಶಸ್ತ್ರಚಿಕಿತ್ಸೆಯ ಅನಂತರ ರೋಗಿಗಳಿಡುವ ಸಾರ್ವತ್ರಿಕ ಕೊಠಡಿಗಳಲ್ಲಿ ಕೂಸುಕೋಣೆಗಳಲ್ಲಿ ಕೀವುನಂಜು ರೋಗ ಅತಿಯಾಗಿ ಕಾಣಿಸುವುದಲ್ಲದೆ ಅತಿ ಸಾವಿಗೂ ಕಾರಣವಾಗಿವೆ. ಪ್ರಸವಮಾಡಿಸುವಾಗ ಅಥವಾ ಶಸ್ತ್ರಚಿಕಿತ್ಸೆ ಮಾಡುವಾಗ ಸರಿಯಾದ ಪೂತಿನಾಶಕ (ಆಂಟಿಸೆಪ್ಟಿಕ್) ಕ್ರಮಗಳನ್ನು ಅನುಸರಿಸದೆ ಹಿಂದಿನ ಕಾಲದಲ್ಲಿ ರೋಗಿಗಳಿಗೆ ಹಾನಿಯೂ ಸಾವುನೋವೂ ಬಹಳವಾಗಿ ಉಂಟಾದುದುಂಟು. ಪೂತಿನಾಶಕ ಕ್ರಮಗಳನ್ನು ಅನುಸರಿಸುವ ವಿಧಾನ ಮತ್ತು ಅದರ ಔಚಿತ್ಯವನ್ನು ಕಂಡುಹಿಡಿದವರಲ್ಲಿ ಲಾರ್ಡ್ ಲಿಸ್ಟರ್ (1827-1912), ಲ್ಯಾಂಗನ್‍ಬೆಕ್ (1810-1887), ಹೋಮ್ಸ್ (1809-94) ಇವರು ಮುಖ್ಯರು. ಇವರು ವೈದ್ಯಜಗತ್ತಿಗೆ ಸಾಬೂನು ನೀರಿನಿಂದ ಕೈತೊಳೆಯುವುದು ಮತ್ತು ಪೂತಿನಾಶಕಗಳ ಉಪಯೋಗ-ಇವುಗಳಿಂದ ಕೀವುನಂಜು ರೋಗ ಬರದಂತೆ ಮಾಡುವುದನ್ನು ತೋರಿಸಿ (1842-67) ಅಪೂರ್ವ ಸೇವೆಸಲ್ಲಿಸಿದ್ದಾರೆ. ಇತ್ತೀಚೆಗೆ ಬೇಕಾದ ಆಯುಧಗಳ ಕ್ರಿಮಿಶುದ್ಧೀಕರಣದ (ಸ್ಟರಿಲೈಸೇಷನ್) ಬಳಕೆಯಿಂದಲೂ ಜೀವಿವಿಷಗಳ ಉಪಯೋಗದಿಂದಲೂ ತಕ್ಕಷ್ಟು ಪ್ರಗತಿ ಸಿದ್ಧಿಸಿದೆ. ಸೋಂಕುವಾಹಕವ್ಯಕ್ತಿಗಳನ್ನು ಪತ್ತೆಹಚ್ಚಿ ಅವರನ್ನು ರೋಗಿಗಳಿಂದ ಬೇರ್ಪಡಿಸಿ ಕ್ರಿಮಿನಾಶಕ ಔಷಧಿಗಳಿಂದ ಶುದ್ಧೀಕರಿಸಿ ಕೀವುನಂಜು ಹಬ್ಬದಂತೆ ಎಚ್ಚರವಹಿಸುತ್ತಿದ್ದಾರೆ. ಹಾಗಿದ್ದರೂ ರೋಗಾಣುಗಳು ನಿವಾರಕ ಔಷಧಿಗಳಿಗೆ ನಿರೋಧಶಕ್ತಿಯನ್ನು ಪಡೆಯುತ್ತಿದ್ದು ಕೀವುನಂಜು ಇನ್ನೂ ಬಗೆ ಹರಿಯದೆ ಪ್ರಶ್ನೆಯಾಗಿಯೇ ಇದೆ.

 ಕೀವುನಂಜು ನಾನಾ ತರವಾಗಿ ರೂಪಿತವಾಗಬಹುದು: 1 ಚರ್ಮದ ಮತ್ತು ಚರ್ಮದ ಕೆಳಗಿನ ಅಂಗಾಂಶಗಳಲ್ಲಿ ಹರಡಿ ಉರಿಯೂತ, ವಸ್ತಿಕುಹರದ ಅಂಗಾಂಶಗಳಲ್ಲಿ ಉರಿಯೂತ, ಮೂತ್ರದ್ವಾರದ ಸುತ್ತಲ ಉರಿಯೂತ, ವಾಯು ತುಂಬಿದ ಅಂಗಕ್ಷಯ-ಈ ತರಹದ ಸ್ಥಳಿಕ ಚಿಹ್ನೆಗಳಲ್ಲದೆ ಇಲ್ಲಿಂದ ಶರೀರಕ್ಕೆ ವಿಷವೇರಿ ಕೀವುನಂಜಿನ ಲಕ್ಷಣಗಳು ಕಾಣಿಸುವುವು. 2 ದುಗ್ಧರಸ ವಾಹಕ ನಾಳಗಳ ಉರಿಯೂತ ಮತ್ತು ದುಗ್ಧರಸಗ್ರಂಥಿಗಳ ಉರಿಯೂತವಾಗಿಯೂ ಕಾಣಬಹುದು. 3 ರೋಗಾಣುಗಳು ರಕ್ತದಲ್ಲಿ ಹರಡಿ ನೆತ್ತರ ನಂಜು ಉಂಟಾಗಬಹುದು.

 ಕೀವುನಂಜು ಯಾವ ತರಹದಲ್ಲಿ ರೂಪಿತವಾದರೂ ಚಳಿ, ಜ್ವರ, ತಲೆನೋವು, ಮೈಕೈನೋವು ಇವು ರೋಗದ ವೈಶ್ಯಿಷ್ಟಗಳು. ಚರ್ಮದ ಮತ್ತು ಚರ್ಮದ ಕೆಳಗಿನ ಅಂಗಾಂಶಗಳಲ್ಲಿ ಹರಡಿದರೆ ಅಲ್ಲಿ ಊತ ಉಂಟಾಗಿ ಚರ್ಮ ಕೆಂಪಾಗಿ, ಬಿಸಿಯಾಗಿ ನೋವಿರುತ್ತದೆ. ವಾಯು ತುಂಬಿದ ಅಂಗಕ್ಷಯದಲ್ಲಿ ಚರ್ಮ ಚಿಟಗುಟ್ಟುವುದಲ್ಲದೆ ದುರ್ವಾಸನೆಯ ಕೀವುಳ್ಳ ವ್ರಣಗಳೂ ಉಂಟಾಗುತ್ತವೆ. ಇಲ್ಲಿಂದ ಕೀವುನಂಜು ದುಗ್ಧರಸನಾಳಗಳಿಗೆ ಹರಡಬಹುದು. ಆಗ ನಾಳಗಳು ಊದಿ ಅವುಗಳ ಮೇಲಿನ ಚರ್ಮ ಕೆಂಪಾದ ನೋವುಳ್ಳ ರೇಖೆಗಳನ್ನು ತೋರಿಸುತ್ತದೆ. ದುಗ್ಧನಾಳಗಳಿಂದ ಉರಿಯೂತ ದುಗ್ಧಗ್ರಂಥಿಗಳಿಗೆ ಹರಡಿ ಗ್ರಂಥಿಗಳು ಊದಿ ನೋವಾಗುತ್ತವೆ; ಕೆಲವು ವೇಳೆ ದುಗ್ಧನಾಳಗಳ ಮೇಲೆ ಕೊಳೆತ ವ್ರಣಗಳು ಕಾಣಸಿಕೊಳ್ಳವುದೂ ದುಗ್ಧಗ್ರಂಥಿ ಕೀವು ತುಂಬಿ ಕುರುವಾಗಿ ಕೀವು ಹೊರಬರುವುದೂ ಉಂಟು. ಕೀವುನಂಜು ದುಗ್ಧಗ್ರಂಥಿಗಳಿಂದ ರಕ್ತಕ್ಕೆ ಹರಡಿ ಅಲ್ಲಿ ರೋಗಾಣುಗಳ ಸಂತತಿ ಅಭಿವೃದ್ಧಿಗೊಂಡು ನೆತ್ತರುನಂಜು ಆಗುವುದಲ್ಲದೆ ದೇಹದ ನಾನಾ ಭಾಗಗಳಲ್ಲಿ ಕುರುಗಳು ಏಳಬಹುದು. ನೆತ್ತರುನಂಜು ತೀರ ಅಪಾಯದ ಸೋಂಕು ರೋಗ. ಇದರಲ್ಲಿ ನಂಜು, ಜ್ವರ ಚಳಿ ಬರುವುದಲ್ಲದೆ ಚರ್ಮದ ಮೇಲೆ ನಾನಾತರಹದ ಗುಳ್ಳೆಗಳೂ ಏಳಬಹುದು. ಹೃದಯಾವರಣದ ಉರಿಯೂತ ಹೃದಯದ ಒಳಪೊರೆಯ ಊತ, ಶ್ವಾಸಕೋಶಾವರಣದ ಉರಿಯೂತ, ಮಿದುಳಿನ ಮತ್ತು ಮಿದುಳು ಬಳ್ಳಿಯ ಪೊರೆಗಳ ಊರಿಯೂತ, ಕೀಲುಗಳ ಉರಿಯೂತ, ಸ್ಥಾನಾಂತರಿಸಿದ ಕುರುಗಳು ಮತ್ತು ರಕ್ತಸ್ರಾವ ತೋರಿಕೆಯ ವಿಲಕ್ಷಣಗಳು ತಲೆದೋರುತ್ತವೆ. ಶೀಘ್ರವಾಗಿ ಸ್ನಾಯುಗಳು ನಿಶ್ಚೇತನಗೊಂಡು ಸಾವು ಸಹ ಉಂಟಾಗಬಹುದು, ಕೀವುಗುಳ್ಳೆ (ಮೊಡವೆ, ಬೊಕ್ಕೆ), ಎಲುಬಿನ ಉರಿಯೂತ, ದಂತ ಚಿಕಿತ್ಸಾನಂತರ ಗಲಗ್ರಂಥಿಯ ಶಸ್ತ್ರಚಿಕಿತ್ಸೆ, ಮೂತ್ರಾಪಕರ್ಷಕದಿಂದ ಮೂತ್ರ ತೆಗೆಯುವಿಕೆ. ವಿಷಮ ಶೀತಜ್ವರ, ಶ್ವಾಸಕೋಶದ ಉರಿಯೂತ, ಉದರ ಪರಿವೇಷ್ಟನ ಪಟಲದ ಉರಿಯೂತ, ಮಿದುಳು ಪೊರೆಗಳ ಉರಿಯೂತ, ಕೆಟ್ಟ ಕುರು, ಸಿಡುಬು, ಸೀತಾಳೆ ಸಿಡುಬು, ಪ್ಲೇಗು ಇತ್ಯಾದಿ ರೋಗಗಳಲ್ಲಿ ಕೀವುಜಾಡ್ಯ ಹರಡಿ ನೆತ್ತರು ನಂಜಾಗಬಹುದು. ಹಸುಕೂಸಿನ ಹೊಕ್ಕುಳಬಳ್ಳಿಯಿಂದ ಕೀವುನಂಜು ಹರಡಿ ನಂಜಾಗುವುದು ವಿರಳವಲ್ಲ.

 ಪ್ರಸೂತಿಸಂಬಂಧವಾದ ಕೀವುನಂಜು ಹೆರಿಗೆಯ ಅನಂತರವೂ ಗರ್ಭಪಾತದ ಅನಂತರವೂ ಕಾಣಿಸಿಕೊಳ್ಳಬಹುದು. ಸಹಜವಾದ ಪ್ರಸೂತಿಯಲ್ಲೂ ಕೆಲವಾರು ಸಣ್ಣ ಜಜ್ಜುಗಾಯಗಳು, ಉಜ್ಜುಗಾಯಗಳು ಇದ್ದು ಕೀವಾಣುಗಳಿಗೆ ಈಡಾಗಬಹುದು. ನಿಧಾನ ಪ್ರಸವ, ಕಸದ ತುಂಡುಗಳು ಒಳಗೇ ಉಳಿಯುವಿಕೆ. ಗರ್ಭಕೋಶದ ಸಡಿಲಿಕೆ ಇವೂ ಕೀವುನಂಜನ್ನು ಹೆಚ್ಚಿಸುತ್ತವೆ. ರಕ್ತಹೀನತೆ, ರಕ್ವಸ್ರಾವ ಹೃದ್ರೋಗ, ಕ್ರಿಮಿಜಾಡ್ಯ ಇವುಗಳಿಂದ ತಾಯಿಯ ರಕ್ಷಣಾಪ್ರತಿಬಂಧಕ ಶಕ್ತಿ ಕುಗ್ಗಿದಲ್ಲಿ ಕೀವುನಂಜು ವಿಶೇಷವಾಗಿ ಅಂಟುವುದು. ಪ್ರಸವ ಸಮಯದಲ್ಲಿ ಪದೇ ಪದೇ ಪರೀಕ್ಷೆಗಳು, ಆಯುಧ ಪ್ರಯೋಗ, ಶಸ್ತ್ರಚಿಕಿತ್ಸೆ ಇವು ಕೀವುನಂಜು ಮತ್ತು ನೆತ್ತರು ನಂಜನ್ನು ಆಹ್ವಾನಿಸುತ್ತವೆ. ಈ ಎಲ್ಲ ಸಂದರ್ಭಗಳಲ್ಲಿ ಕೀವುನಂಜು ಉತ್ಪತ್ತಿಮಾಡುವ ರೋಗಾಣುಗಳು ರೋಗಿಯ ದೇಹದಿಂದಾಗಲಿ ವೈದ್ಯರು ಸೂಲಗಿತ್ತಿಯರಿಂದಾಗಲಿ ಹರಡಿ ರೋಗೋತ್ಪತ್ತಿಯಾಗುತ್ತದೆ. ದೋಷಾತ್ಮಕ ಗರ್ಭಪಾತದಲ್ಲಿ ಕೀವುನಂಜಾಗಿ ನೆತ್ತರು ನಂಜಿಗೆ ತಿರುಗಿ ಸಾವೇ ಸಂಭವಿಸಬಹುದು. ಪ್ರಸೂತಿ ಸಂಬಂಧವಾದ ಕೀವುನಂಜನ್ನು ತಡೆಯಲು ಪ್ರಸೂತಿಮಾಡಿಸುವವರು ಸೋಂಕುವಾಹಕರಾಗಿರದೆ, ಕೈಗಳನ್ನು ಚೆನ್ನಾಗಿ ಸಾಬೂನು ನೀರಿನಿಂದ ತೊಳೆದು ಪೂತಿನಾಶಕಗಳಲ್ಲಿ ಅದ್ದಿ ಪ್ರಸವ ಮಾಡಿಸುವುದು ಅತಿ ಮುಖ್ಯ ಕ್ರಮ.

 ಕೀವುನಂಜು, ನೆತ್ತರುನಂಜು ಉಗ್ರವ್ಯಾಧಿಗಳು. ಇವನ್ನು ಶೀಘ್ರವಾಗಿ ಜೀವಾಣುಗಳನ್ನು ನಾಶಮಾಡುವ ಔಷಧಿಗಳನ್ನು ಬಳಸಿ ರೋಗಾಣುಗಳನ್ನು ನಿವಾರಿಸುವುದಲ್ಲದೆ ರೋಗಿಯ ಪ್ರತಿರೋಧಶಕ್ತಿಯನ್ನು ಹೆಚ್ಚಿಸಬೇಕು. ಕೀವು ಎಲ್ಲಿಯಾದರೂ ಅಡಗಿದ್ದರೆ ಅದನ್ನು ಹೊರತೆಗೆಯುವುದು ಅತ್ಯಾವಶ್ಯಕ. ಜೊತೆಗೆ ರೋಗಿಯ ರಕ್ತವೃದ್ಧಿ ಶಕ್ತಿವೃದ್ಧಿಗೆ ಬೇಕಾದ ಉಪಚಾರಗಳನ್ನೂ ಮಾಡಬೇಕು.

(ಆರ್.ಡಿ.ಎಂ.)

 ಪೂತಿನಾಶಕಗಳು : ಇವು ವಿಷಕ್ರಿಮಿಗಳನ್ನು ನಾಶಪಡಿಸುತ್ತವೆ. ಈ ವಿಧಾನಕ್ಕೆ ಎಸೆಪ್ಸಿಸ್ ಎಂದು ಹೆಸರು. ಬೇರೆ ಬೇರೆ ಪಂಗಡಕ್ಕೆ ಸೇರಿದ ಕೆಲವು ರಾಸಾಯನಿಕ ದ್ರವ್ಯಗಳು ಅಪಾಯಕರವಾದ ಸೂಕ್ಷ್ಮದರ್ಶಕೀಯ ಕ್ರಿಮಿಗಳನ್ನು ನಾಶಮಾಡಬಲ್ಲುವು. ಅವುಗಳಲ್ಲಿ ಕೆಲವು ಬ್ಯಾಕ್ಟಿರಿಸೈಡಲ್ ಎಂದರೆ ವಿಷಕ್ರಿಮಿಗಳನ್ನು ನಾಶಮಾಬಲ್ಲುವು. ಮತ್ತೆ ಕೆಲವು ಬ್ಯಾಕ್ಟೀಯೋಸ್ಟಾಟಿಕ್ ಎಂದರೆ ಬ್ಯಾಕ್ಟೀರಿಯಗಳ ಪ್ರಭಾವವನ್ನು ತಗ್ಗಿಸುತ್ತವೆ. ಯಾವುದೊಂದು ವಸ್ತು ಎಲ್ಲ ಸನ್ನಿವೇಶಗಳಲ್ಲಿಯೂ ಸಮರ್ಪಕವಾಗಿ ಫಲಕಾರಿಯಾಗಲಾರದು. ಆದರೆ ಈ ವಸ್ತುಗಳ ಉಪಯೋಗ ಈಗಿನ ಆಧುನಿಕ ಔಷಧಶಾಲೆಗಳಲ್ಲಿ ಅತ್ಯಾವಶ್ಯಕ. ಶಸ್ತ್ರಚಿಕಿತ್ಸೆಗೆ ಮೊದಲು ಮನುಷ್ಯನ ಅಂಗಗಳು, ಅಂದರೆ ಅದರ ಮೇಲಿನ ಚರ್ಮ, ವೈದ್ಯಶಾಸ್ತ್ರೀಯ ಅಸ್ತ್ರಗಳು ಮತ್ತು ಅದಕ್ಕೆ ಬೇಕಾದ ಸಲಕರಣಿ ಇವೆಲ್ಲವನ್ನೂ ವಿಷಕ್ರಿಮಿಗಳಿಂದ ಕಾಪಾಡಬೇಕಾಗುವುದು. ಕೊಳೆತು ನಾರುವ ವಿಷಕ್ರಿಮಿಗಳು ಚರ್ಮದ ಮೂಲಕ ಮನುಷ್ಯನ ಒಳಭಾಗವನ್ನು ಸೇರಿ ಎಂಥ ಅಪಾಯವನ್ನಾದರೂ ತಂದೊಡ್ಡಬಹುದು. ಇಂಥವನ್ನು ತಡೆದುದರ ಖ್ಯಾತಿ ಜೋಲಿಸ್ಟರ್ ಎಂಬ ಪ್ರಸಿದ್ಧ ಪುರುಷನಿಗೆ ಸಲ್ಲುವುದು. ಆತ ಕಾರ್ಬಾಲಿಕ್ ಆಮ್ಲ ಎಂಬುದನ್ನು ಔಷಧಶಾಲೆಗಳಲ್ಲಿ ಉಪಯೋಗಿಸಿ ನಂಜನ್ನು ಬಹುಮಟ್ಟಿಗೆ ತಡೆಗಟ್ಟಿದ. ಈಗಿನ ಔಷಧಶಾಲೆಗಳಲ್ಲಿ ನಂಜನ್ನು ತಡೆಗಟ್ಟುವುದೇ ಒಂದು ನಿಯಮವೆಂದು ತಿಳಿದು ಒಂದು ಚಿಕಿತ್ಸೆ ನಡೆಯುವುದರ ಮುನ್ನ ಆ ಭಾಗದ ಚರ್ಮ, ಉಪಯೋಗಿಸುವ ಅಸ್ತ್ರಗಳು. ರಬ್ಬರ್ ಚೀಲಗಳು ಮತ್ತು ಇನ್ನಿತರ ಸಲಕರಣೆಗಳೆಲ್ಲವನ್ನೂ ವಿಷನಾಶಕ ದ್ರವದಿಂದಾಗಲೀ ಅಥವಾ ಹೆಚ್ಚು ಉಷ್ಣತೆಯಲ್ಲಿ ಉಷ್ಣ ಕ್ರಿಮಿನಾಶಕ ವಿಧಾನದಿಂದಾಗಲೀ ಕಾಪಾಡಿ ಸೂಕ್ಷ್ಮದರ್ಶಕೀಯ ವಿಷಾಣುಗಳು ಒಳಗೆ ಪ್ರವೇಶಿಸದಂತೆ ಮಾಡಬಹುದು.

 ಬೇರೆ ಬೇರೆ ಗುಂಪಿನ ವಸ್ತುಗಳನ್ನು ಈ ಕ್ರಿಮಿನಾಶಕ ಕಾರ್ಯದಲ್ಲಿ ಉಪಯೋಗಿಸುವುದರಿಂದ, ಅದರ ಪರಿಣಾಮ ಇಷ್ಟೇ ಎಂದು ಹೇಳಬೇಕಾದರೆ ಒಂದು ಅಳತೆ ಬೇಕು. ಅದು ರೈಡಿಲ್ ವಾಕರ್ ಎಂಬಾತ ಕಂಡುಹಿಡಿದ (1903) ವಿಧಾನದಿಂದ ಹೇಳಬಹುದು. ಅಂದರೆ ವಿಷಮಶೀತಜ್ವರದ ಕ್ರಿಮಿಗಳನ್ನು 24 ಗಂಟೆಗಳಲ್ಲಿ ಕೊಲ್ಲಬೇಕಾದರೆ ಫೀನಾಲ್ ಎಂಬ ಕ್ರಿಮಿನಾಶಕ ಎಷ್ಟು ಬೇಕಾಗುತ್ತದೋ ಎಂಬುದನ್ನು ತಿಳಿದು ಅದನ್ನು ಬೇರೆ ಪೂತಿನಾಶಕ ವಸ್ತುಗಳೊಡನೆ ಹೋಲಿಸುವುದು. ಈ ಹೋಲಿಕೆಯ ಪ್ರಮಾಣಕ್ಕೆ ಫೀನಾಲ್ ಗುಣಾಂಕ ಅಥವಾ ರೈಡಿಲ್‍ವಾಕರ್ ಗುಣಾಂಕ ಎಂದು ಹೆಸರು. ಒಂದು ವಸ್ತುವಿನ ಫಲ ಫಿನಾಲಿಗಿಂತ 2, 4 ಅಥವಾ 6ರಷ್ಟು ಎಂದು ಹೋಲಿಸಬಹುದು. ಆಧುನಿಕ ಕಾಲದಲ್ಲಿ ಇಂಥ ವಸ್ತುಗಳ ಫಲಾಫಲ ಅಂಗಾಂಗಗಳ ಒಳಗೆ ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ.

 ಪೂತಿನಾಶಕ ವಸ್ತುಗಳನ್ನು ಒಂಬತ್ತು ವಿಭಾಗವಾಗಿ ವಿಂಗಡಿಸಬಹುದು: 1 ಉತ್ಕರ್ಷಣಕಾರಕಗಳು (ಆಮ್ಲಜನಕದೊಡನೆ ಸಂಯೋಗ ಪದಾರ್ಥಗಳು): ಏಒಟಿಔ4.ಊ2ಔ2. ಇವುಗಳ ಕ್ರಿಯಾಸಾಮಥ್ರ್ಯಶಕ್ತಿ, ಆಮ್ಲಜನಕ ಹೊರಡುವುದುರಿಂದ ಲಭಿಸಿದೆ. 2 ಹ್ಯಾಲೋಜೆನ್ಸ್: ಅಟ, I ಅಯೊಡೋಫಾರಂ. ಅಯೊಡೀನ್ ಮತ್ತು 70% ಆಲ್ಕೊಹಾಲ್ ಮಿಶ್ರಣ ಚರ್ಮವನ್ನು ವಿಷಾಣುಗಳಿಂದ ದೂರಮಾಡಿ ಶುದ್ಧಿ ಮಾಡುವುದು. 3 ಆಮ್ಲಗಳು ಮತ್ತು ಕ್ಷಾರಗಳು: ಬೋರಿಕ್ ಆಮ್ಲ ಬೊರಾಕ್ಸ್, ಬೆನ್‍ಜೋಯಿಕ್ ಮುಂತಾದವು. ಆದರೆ ಇವು ಅಂಗಗಳನ್ನೇ ಕ್ಷಯಿಸುವುದರಿಂದ ಅಷ್ಟು ಪ್ರಯೋಜನಕಾರಿಯಲ್ಲ. 4 ಅಪಮಾರ್ಜಕಗಳು (ಡಿಟರ್‍ಜೆಂಟ್ಸ್): ಅಂಗಶುದ್ಧಿ ಮಾಡುವ ವಸ್ತುಗಳು. ಉದಾಹರಣೆಗೆ ಸಾಬೂನು, ಜೆಪರ್ನಿನ್ ಮುಂತಾದುವು. ಇವು ಚರ್ಮವನ್ನು ಶುದ್ಧಮಾಡಿ ವಿಷಕ್ರಿಮಿಗಳನ್ನು ತಡೆಗಟ್ಟುತ್ತವೆ. 5 ಆಲ್ಕೊಹಾಲ್ (ಮದ್ಯಸಾರ): ಈಥೈಲ್ ಆಲ್ಕೊಹಾಲ್ 70% ಚರ್ಮಶುದ್ಧಿಗೆ ಬಹಳ ಒಳ್ಳೆಯ ವಸ್ತು. 6 ಆಲ್‍ಡಿಹೈಡ್‍ಗಳು: ಆಲ್ಕೊಹಾಲ್ ಆಮ್ಲಜನಕದ ಜೊತೆಗೆ ಕೂಡಿ ಆಗುವ ಸಂಯುಕ್ತ ಪದಾರ್ಥಗಳು. ಉದಾಹರಣೆಗೆ ಫಾರ್ಮಾಲ್ ಡಿ ಹೈಡ್ 2%-5% ದ್ರಾವಣವನ್ನು ಶಸ್ತ್ರಗಳನ್ನು ಶುದ್ಧಿಮಾಡಲು ಉಪಯೋಗಿಸುವುದುಂಟು. 7 ಲೋಹಗಳ: ಪದಾರ್ಥಗಳು: ಉದಾಹರಣೆಗೆ ಸಿಲ್ವರ್ ನೈಟ್ರೇಟ್ (ಂgಓಔ3), ಮಕ್ರ್ಯುರಿಕ್ ಕ್ಲೋರೈಡ್ (ಊgಅಟ2) ಕ್ಲೋರೈಡ್, ಮರಕುರೊ ಕ್ರೊಂ ಮತ್ತು ಮರ್‍ಕೈಲೇಟ್ ಇವು ಅಂಗವನ್ನು ದಹಿಸದೆ ಶುದ್ಧಿಮಾಡುವುವು. ಇವುಗಳ ಲೇಪನದಿಂದ ಚರ್ಮವನ್ನು ಮತ್ತು ಅಸ್ತ್ರಗಳನ್ನು ಶುದ್ಧಿಮಾಡಬಹುದು. 8 ವರ್ಣದ್ರವ್ಯಗಳು (ಡೈಸ್): ಅಕ್ರಿಫ್ಲೇವಿನ್, ಬ್ರಿಲಿಯಂಟ್ ಗ್ರೀನ್ ಮೈಲೇಟ್ ಮತ್ತು ಕ್ರಿಸ್ಟಲ್ ವೈಲೇಟ್ ಇವು ಕ್ರಿಮಿನಾಶಕ ವಸ್ತುಗಳು ಮತ್ತು ಸೂಕ್ಷ್ಮಾಣುಗಳಿಗೆ ವರ್ಣವನ್ನು ಕೊಡುವುವು. ಮನುಷ್ಯನ ಅವಯವಗಳಿಗೆ ಬಹುಕಾಲದ ವರೆಗೆ ಉಪಯೋಗಿಸಿದರೂ ಇವು ವಿಷವಾಗುವುದಿಲ್ಲ. 9 ಫೀನಾಲ್ ಉತ್ಪನ್ನಗಳು : ಕಾರ್ಬಾಲಿಕ್ ಆಮ್ಲವನ್ನು ಲಿಸ್ಟರ್ ಎಂಬ ಸಂಶೋಧಕ ಉಪಯೋಗಿಸಿ ಇದು ಕ್ರಿಮಿನಾಶಕವಾಗಿ ಬಹಳ ಉತ್ಕøಷ್ಟವಾದ ವಸ್ತುವೆಂದು ತೋರಿಸಿದ್ದಾನೆ. ಫೀನಾಲ್ ಒಂದೇ ಅಲ್ಲದೆ ಅದರಿಂದ ತಯಾರಿಸಿದ ಇತರ ದ್ರಾವಣಗಳಾದ ಡೆಟ್ಟಾಲ್, ಲೆಸಾಲ್ ಎಂಬುದನ್ನು ಕೂಡ ವಿಷಕ್ರಿಮಿಗಳನ್ನು ತಡೆಯುವ ವಸ್ತುಗಳಾಗಿ ಉಪಯೋಗಿಸುತ್ತಾರೆ.

(ಬಿ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ